
ಹಂಪಿ ಮತ್ತು ಆನೆಗುಂದಿಯ ಸಂಪರ್ಕ ಕಲ್ಪಿಸುವ ಸೇತುವೆ ಕುಸಿಯುವುದಕ್ಕೆ ಮುಂಚಿನ ದೃಶ್ಯ
ಈ ಸೇತುವೆ ನಮ್ಮ ನಾಲ್ಕು ದಶಕಗಳ ಕನಸು ಇದು ನೆರವೇರಲು ಆಗುತ್ತಿಲ್ಲ 1993 ರಲ್ಲಿ ಸೇತುವೆ ಕಾಮಗಾರಿ ಪ್ರಾರಂಭವಾಗಿದ್ದು ಯುನೆಸ್ಕೋ ಸಂಸ್ಥೆ 1999 ರಲ್ಲಿ ಕಾಮಗಾರಿಯನ್ನು ನಿಲ್ಲಿಸಿತು ಅಂತ. ಯುನೆಸ್ಕೋ ಹೇಳುವ ಪ್ರಕಾರ ಸೇತುವೆಯ ಮೇಲೆ ಭಾರಿ ವಾಹನ ಸಂಚಾರ ಮಾಡಿದರೆ ವಿಶ್ವ ಪರಂಪರೆಯ ತಾಣವಾದ ಹಂಪಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ ಅದರಲ್ಲೂ ತೂಗು ಸೇತುವೆಯಾದ್ದರಿಂದ ಕಾಮಗಾರಿಯನ್ನು ನಿಲ್ಲಿಸಿತ್ತು. ಅಂದ ಹಾಗೆ ಹಂಪಿಯಿಂದ ಆನೆಗುಂದಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಅಕಸ್ಮಾತ್ ಸಾರಿಗೆ ವ್ಯವಸ್ಥೆ ಇದೆ ಅಂದ್ರೆ ಹಂಪಿಯಿಂದ ಹೊಸಪೇಟೆ ಅಥವಾ ಕಮಲಾಪುರ ಹೋಗಿ ಅಲ್ಲಿಂದ ಗಂಗಾವತಿ ಹೋಗಿ ಅಲ್ಲಿಂದ ಆನೆಗುಂದಿ ತಲಪಬೇಕು. ಈ ರೀತಿ ಹೋದ್ರೆ ಕಡಿಮೆ ಅಂದ್ರು ಸಹ ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ. ಇದು ಬೇಡ ಅಂದ್ರೆ ಕಮಲಾಪುರದಿಂದ ಆಟೋದಲ್ಲಿ ಹೋಗಿ ತಲವಾರಘಟ್ಟ ತಲುಪಬೇಕು ಅಲ್ಲಿಂದ ಆನೆಗುಂದಿಗೆ ದೋಣಿಯಲ್ಲಿ ನದಿ ದಾಟಿ ಅಲ್ಲಿಂದ ಸುಮಾರು ಒಂದು ಕಿಲೋ ಮೀಟರ್ ನಡೆಯುತ್ತಾ ಹೋಗಬೇಕು. ಅಂತು ಯುನೆಸ್ಕೋ ಸಂಸ್ಥೆ 2008 ರಲ್ಲಿ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿತು. ಅದು ಸಹ ಲಘುವಾಹನ ಸಂಚಾರ ಮಾಡುವುದಕ್ಕೆ ಮಾತ್ರ.

ಹಂಪಿ ಮತ್ತು ಆನೆಗುಂದಿಯ ಸಂಪರ್ಕ ಕಲ್ಪಿಸುವ ತೂಗುಸೇತುವೆ ಕುಸಿದಿರುವ ದೃಶ್ಯ
ನವಂಬರ್ 11 ರಂದು ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿಯವರು ಸೇತುವೆಯನ್ನು ಪೂರ್ಣಗೊಳಿಸುವ ಕಾಮಗಾರಿಗೆ ಮರುಚಾಲನೆ ನೀಡಿದ್ದರು. ಈ ಕಾಮಗಾರಿಯ ಗುತ್ತಿಗೆಯನ್ನು ಆಂದ್ರ ಮೂಲದದವರು ಪಡೆದಿದ್ದರು. ಇಲ್ಲಿ ಕೆಲಸ ಮಾಡಲು ಸ್ಥಳಿಯರಲ್ಲದೇ ಆಂದ್ರ ಮತ್ತು ಬಿಹಾರದ ಮೂಲದ ಕಾರ್ಮಿಕರು ಬಂದಿದ್ದರು. ಸೇತುವೆ ಕುಸಿಯುತ್ತಿದ್ದಂತೆ ಗುತ್ತಿಗೆದಾರ, ವ್ಯವಸ್ಥಾಪಕರು, ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಮತ್ತು ಸತ್ತವರ ಸಂಖ್ಯೆ 30 ದಾಟಿದೆ ಎಂದು ಸ್ಥಳಿಯರು ಹೇಳುತ್ತಾ ಇದ್ದಾರೆ. ಗಾಯಗೊಂಡವರನ್ನು ಕಮಲಾಪುರ, ಹೊಸಪೇಟೆ, ಬಳ್ಳಾರಿ, ಗಂಗಾವತಿಯ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಸೇತುವೆಯನ್ನು ನಿರ್ಮಾಣ ಮಾಡಲು 15 ವರ್ಷಗಳ ಹಿಂದೆ ಕಾಮಗಾರಿಯನ್ನು ಪ್ರಾರಂಭಿಸಿದ್ದು ಇದಕ್ಕೆ ಹಾಕಿದ್ದ ಕಬ್ಬಿಣದ ಕಂಬಿಗಳು ತುಕ್ಕು ಹಿಡಿತ ಪರಿಣಾಮವಾಗಿ ಈ ಅವಘಡ ಸಂಬಂದಿಸಿದೆ ಎಂದು ಅಧಿಕಾರಿಗಳು ಮತ್ತು ಸ್ಥಳೀಯರು ಹೇಳ್ತಾ ಇದ್ದಾರೆ.
ಗೆಳೆಯರೇ ನೀವು ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಟೀವಿಯಲ್ಲಿ ನೋಡಿರ್ತೀರ, ಪೇಪರ್ ನಲ್ಲಿ ಓದಿರ್ತೀರಾ. ನಾನು ಹಲವಾರು ಬಾರಿ ಇದೇ ತಲವಾರಘಟ್ಟವನ್ನು ದಾಟುತ್ತಾ ಅರ್ಧಕ್ಕೆ ನಿಂತ ಸೇತುವೆಯನ್ನ, ಮತ್ತು ಕಾಮಗಾರಿ ನಡೆಯುತ್ತಿದ್ದ ಸೇತುವೆಯನ್ನ ನೋಡುತ್ತಾ ಆನೆಗುಂದಿ ಸೇರಿದ್ದೆ. ಆದ್ದರಿಂದ ಈ ಬ್ಲಾಗ್ ಬರೀಬೇಕು ಅಂತ ಆಸೆಯಾಯಿತು ಅದಕ್ಕಾಗಿ ಬರೆದೆ. ಜನವರಿ 1 ರಂದು ಆನೆಗುಂದಿ ಬೇಟಿ ಮಾಡಿದಾಗ ಸಹ ನಮ್ಮ ಕನಸು ನನಸಾಯಿತು ಸಾರ್ ನಮ್ಮ ಸಾರಿಗೆಗೆ ಇನ್ನು ಯಾವುದೇ ಅಭಾವ ಇಲ್ಲ ಇನ್ ಮೇಲೆ ನೀವು ಸಹ ಹೊಸಪೇಟೆಯಿಂದ ನೇರವಾಗಿ ಆನೆಗುಂದಿ ತಲಪಬಹುದು ಅಂತ ಬಹಳಷ್ಟು ಜನ ಹೇಳಿದ್ರು. ಆದ್ರೆ ಕೆಲವೇ ನಿಮಿಷಗಳಲ್ಲಿ ನುಚ್ಚು ನೂರಾಯಿತು. ಮತ್ತೆ ಅವರುಗಳ ಕನಸು ನನಸಾಗುವುದು ಯಾವಾಗ ಅಂತ ಗೊತ್ತಿಲ್ಲ.